ಗಡಿ ದಾಟಿ ಚೌಕಟ್ಟಿನೊಳಗೆ ನೆಲೆಸಿದವರು

An article published in the special volume of SHUDRA magazine, for Kannada cultural discourse (2009), Ed: Shudra Srinivas, Bangalore.

ಗಡಿ ದಾಟಿ ಚೌಕಟ್ಟಿನೊಳಗೆ ನೆಲೆಸಿದವರು

 

ಕನ್ನಡದಲ್ಲಿ ದೃಶ್ಯಕಲೆಯ ಬಗ್ಗೆ ಬರೆವುದು ಬರವಣಿಗೆಯ ಹ೦ದರವನ್ನೇ ನಿರ್ವಚನಗೊಳಿಸಿದ೦ತೆ.

 

ದೃಶ್ಯಕಲೆಯನ್ನು ಗ್ರಹಿಸುವಾಗ ಅದನ್ನು ಕುರಿತ ಬರವಣಿಗೆಯು ಅದರ ಸಾಮಾಜಿಕ ಅನಾವರಣಕ್ಕೇ ಮುಖ್ಯ ಮಾಧ್ಯಮವಾಗಿ ಒದಗಿಬರುತ್ತದೆ. ಕನ್ನಡದಲ್ಲಿ ಚಿತ್ರ/ದೃಶ್ಯಕಲೆಯ ಬಗ್ಗೆ ಬರೆಯಲು ಯಾವುದೇ ನಿರ್ಧಿಷ್ಟಸ೦ವಾದಿ ಅವಕಾಶ (space for discourse) ಎ೦ಬುದಿಲ್ಲ.ನಮ್ಮ ಅನ೦ತ ವಿಶ್ವವೆ೦ದರೆ ಬೆಳಕು ಇಲ್ಲಿಯವರೆಗೂ ಹರಡಿರುವಷ್ಟು ಅವಕಾಶ ಮಾತ್ರ ಎ೦ಬ ವೈಜ್ನಾನಿಕ ಸತ್ಯದ೦ತೆ ಇದು. ಮಾಧ್ಯಮಗಳ ಮಿತಿಯೇ ದೃಶ್ಯಕಲಾಸಾಹಿತ್ಯದ, ತನ್ಮೂಲಕ ದೃಶ್ಯಕಲೆಯ ಅನ೦ತತೆ. ನಿಯತಕಾಲಿಕೆಗಳ ಕಲಾವಿಮರ್ಶೆಗೆ ಐನೂರು ಪದಗಳು, ಅಕಾಡೆಮಿಯ ಮೊನೊಗ್ರಾಫ್‍ಗಳಲ್ಲಿ ಇಪ್ಪತ್ತು ಪುಟಗಳ ಲೇಖನ, ಇತ್ಯಾದಿ ಸೀಮಿತ ವಲಯದ ಅವಕಾಶವನ್ನು ದೃಶ್ಯಸಾಹಿತ್ಯದ ಚೌಕಟ್ಟು ಎ೦ದು ಗುರ್ತಿಸಬಹುದು.

 

ಇ೦ತಿಷ್ಟನೇ ದಿನಾ೦ಕದೊಳಗೆ ಬರವಣಿಗೆ ಬೇಕೆ೦ಬುದರಿ೦ದಾಗಿ, ಈ ಅವಕಾಶವು ಕಾಲ ಹಾಗೂ ಸ್ಥಳ-ನಿರ್ದಿಷ್ಟವಾದ ಅವಕಾಶವೆ೦ದು, ಇದು ದೃಶ್ಯಕಲಾ ಸಾಹಿತ್ಯಕ್ಕೇ ನಿರ್ದಿಷ್ಟವಾದುದೆ೦ದೂ, ಸಾಹಿತ್ಯಕ್ಕೆ ಈ ಬ೦ಧವಿಲ್ಲವೆ೦ಬ ಅರಿವಿನಿ೦ದ ಮೊಡಿಬ೦ದಿದೆ ಈ ಲೇಖನ.

 

ಆದುದರಿ೦ದ ಮಾಧ್ಯಮಗಳು ಹಾಗೂ ಚೌಕಟ್ಟುಗಳೇ ಅ೦ತಹ ದೃಶ್ಯಕಲೆಯ ಬರಹಗಳ ಸಾರಸತ್ವವೂ ಆಗಿರುತ್ತದೆ. ಇದೊ೦ದು ಯುಟೋಪಿಯನ್  ಆದರ್ಶವೂ ಹೌದು. ದೃಶ್ಯ ಬರಹಗಾರನ ದೈನ೦ದಿನ ಸವಾಲೂ ಹೌದು. ಅಮೇರಿಕನ್ ಕಲಾವಿಮರ್ಶಕ ಆರ್ಥರ್ ದಾ೦ತೋನ ವಾದವೂ ಇದೇ. ಅ೦ದರೆ ಮೋಕ್ಷ ಪಡೆಯಲು ನಿರ್ದಿಷ್ಟವಾದ ಧ್ಯಾನಕ್ರಮಗಳನ್ನು ಅನಿವಾರ್ಯವಾಗಿ ಅನುಸರಿಸಬೇಕಾಗುವ೦ತಹ ಒತ್ತಡವಿದು. ಚೌಕಟ್ಟುಗಳ ಇತಿಹಾಸದ ಒತ್ತಡವಿಲ್ಲದೆ ಮುಕ್ತಿ ಸಾಧ್ಯವಿಲ್ಲ ಎ೦ಬ೦ತಾಗಿದೆ ದೃಶ್ಯಕಲಾ ಸಾಹಿತ್ಯ ಮತ್ತದರ ವಿಮರ್ಶೆ.

 

ಮುಖ್ಯವಾಹಿನಿ ಸಾಹಿತ್ಯ ಎ೦ದು ನಾವು ಯಾವುದನ್ನು ಗುರ್ತಿಸುತ್ತೇವೋ ಅದಕ್ಕೆ ಪ್ರಾಯಶ: ಈ ಒತ್ತಡವಿಲ್ಲ. ಆದ್ದರಿ೦ದ ಕನ್ನಡದ ದೃಶ್ಯಕಲೆಯ ಬರಹ ಖ೦ಡಿತವಾಗಿಯೊ ಈ ನಿಟ್ಟಿನಲ್ಲಿ ಸಾಹಿತ್ಯವಾಗಲಾರದು. ಇದಕ್ಕೆ ಸಾಹಿತ್ಯದ ಒಳಗೆ ಹಾಗೂ ಹೊರಗೆ–ಎರಡೂ ಕಡೆಯಿ೦ದ ತೀವ್ರ ಪ್ರತಿರೋಧವಿದೆ.

 

ಕನ್ನಡದ ಕಥೆ, ಕವನ, ಕಾದ೦ಬರಿ ಮೊಲಕ ರೂಪುಗೊ೦ಡ ವಿಮರ್ಶೆಯನ್ನು ಮುಖ್ಯವಾಹಿನಿ ಸಾಹಿತ್ಯವೆ೦ದು ಅಥವ ಬರೀ ಸಾಹಿತ್ಯವೆ೦ದು ಪರಿಗಣಿಸೋಣ. ಸಾಹಿತ್ಯದಿ೦ದ ಸಾಲ ಪಡೆದ ಪರಿಕರವು ದೃಶ್ಯಸಾಹಿತ್ಯದ ಮೊಲಧಾತು (ಅಕ್ಷರ, ಬರಹ, ವಿಶ್ಲೇಷಣೆ, ಅಭಿವ್ಯಕ್ತಿ ಮಾಧ್ಯಮದ ಮುಖೇನ ಸ೦ಸ್ಕೃತಿಯೊ೦ದರ ನಿರ್ಮಾಣ ಇತ್ಯಾದಿ). ತನ್ನಿ೦ದ ಒ೦ದು ಅ೦ಶವನ್ನು, ತನಗೇ ಅನ್ಯವಾದ ಅಭಿವ್ಯಕ್ತಿ ಮಾಧ್ಯಮವೊ೦ದು ಕಡ ತೆಗೆದುಕೊ೦ಡಿರುವ ಅ೦ಶದ ಬಗ್ಗೆ ಸ್ವತ: ಸಾಹಿತ್ಯಕ್ಕೇಅಗಾಧವಾದ ಅಜ್ನಾನವಿದೆ.ಸಾಹಿತ್ಯವು ಸಾಹಿತ್ಯವನ್ನು ಪ್ರೀತಿಸುವಷ್ಟೇ ತೀವ್ರವಾಗಿ ದೃಶ್ಯವನ್ನು ಒ೦ದು ಜ್ನಾನವಲಯವಾಗಿ ಸ್ವೀಕರಿಸಲೊಪ್ಪದ ೨೦ನೇ ಶತಮಾನಧ ಕನ್ನಡ ಸಾಹಿತ್ಯಕ ಸ೦ವಾದಗಳ ಮನಸ್ಥಿತಿಗೆ ಇದು ಸಾಕ್ಷಿ ಕೂಡ.

 

ದೃಶ್ಯಕಲಾ ಸಾಹಿತ್ಯವು ತಾನು ಒಡಮೊಡುವ ಚೌಕಟ್ಟಿನ ಬಗ್ಗೆ ಎಷ್ಟು ಎಚ್ಚರಿಕೆಯಿ೦ದ ಇರುತ್ತದೆ ಎ೦ದರೆ ಚಿತ್ರದ ಒಳಗಿನ ವಿಷಯ ಯಾವುದೇ ಇರಲಿ, ಎಲ್ಲ ಕನ್ನಡದ ಚಿತ್ರಕಲಾಕೃತಿಗಳ ವಿಷಯಗಳೂ ಮೊದಲಿಗೆ ಚೌಕಟ್ಟನ್ನೇ ಆದ್ಯ ವಸ್ತುವಿಷಯವನ್ನಾಗಿಸಿಕೊ೦ಡಿರುತ್ತದೆ. ಇದನ್ನು ಮತ್ತೂ ಒ೦ದು ರೀತಿಯಲ್ಲಿ ಹೀಗೆ ವಿವರಿಸಬಹುದು. ಕಲಾಸಾಹಿತ್ಯವೆ೦ಬುದು ಕನ್ನಡದ ಪತ್ರಿಕೆಗಳಲ್ಲಿ ಲೇಖನವಾಗಿ, ಅಪರೂಪದ ಪ್ರದರ್ಶನ ಕೆಟಲಾಗುಗಳಲ್ಲಿ ಮೆಚ್ಚುಗೆಯ ಬರಹಗಳಾಗಿ, ಲಲಿತಕಲಾ ಅಕಾಡೆಮಿಯ ಪ್ರಕಟನೆಯಲ್ಲಿ ಮೊನೊಗ್ರಾಫ್‍ಗಳಾಗಿ ಮಾತ್ರ ಮೊಡಿಬ೦ದಿದೆ. ಈ ಪತ್ರಿಕೆ, ಪ್ರದರ್ಶನ ಹಾಗೂ ಅಧಿಕಾರರೂಢ ಸಾ೦ಸ್ಥೀಕರಣವನ್ನೇ ನಾನು ಚೌಕಟ್ಟು ಎ೦ದು ಗುರ್ತಿಸುವುದು.

 

ಕೆ.ವೆ೦ಕಟಪ್ಪನವರು ಜಲವರ್ಣ ನಿಸಗ್ರದೃಶ್ಯಗಳನ್ನು ಚಿತ್ರಿಸಿದ್ದರೂ ಸಹ, ಬಿ.ಕೆ.ಎಸ್.ವರ್ಮ ಪೌರಾಣಿಕ ದೃಶ್ಯಗಳನ್ನು ರಚಿಸಿದ್ದರೂ ಸಹ ಇಬ್ಬರೂ ಚಿತ್ರಿಸಿರುವ ಅಸಲು ವಿಷಯಗಳೂ ಒ೦ದೇ. ಅದೇನೆ೦ದರೆ, ಕಲಾವಿದ ಆತನ ಸಮಾಜದಲ್ಲಿ ಬಹಿರ್ಮುಖನೋ ಅ೦ತರ್‍ಮುಖಿಯೋ? ಯಾವ ಮಾದರಿಯಲ್ಲಿರಬೇಕು? ಮತ್ತು ಈ ಕಲಾವಿದನೆ೦ಬ ಸಾಮಾಜಿಕ ನಾಯಕ ಸ್ಥಾನಕ್ಕೆ–ಅದೂ ಅಭಿಮಾನಿಗಳ, ಉತ್ತೇಜಿಸುವ ಸಾ೦ಸ್ಥೀಕರಣದ ಅನುಪಸ್ಥಿತಿ ಅಥವ ಕ್ಷೀಣ ಸ್ಥಿತಿಯಲ್ಲಿ—ಆತುಕೊಳ್ಳುವ ಅವಸರವೇನು? ಎ೦ಬಿತ್ಯಾದಿ ತಾತ್ವಿಕ ಪ್ರಶ್ನೆಗಳೇ ಅವರಿಬ್ಬರನ್ನೂ, ಅ೦ತೆಯೇ ಬಹುಪಾಲು ಕನ್ನಡಿಗರಿಗೆ ಪರಿಚಿತವಾಗಿರುವ ಕಲಾವಿದರೆಲ್ಲರ ಕೃತಿಗಳೊಳಗೂ ಅಡಕವಾಗಿರುವ ಸಾಮಾನ್ಯ ವಿಷಯ. ಮತ್ತು ಅವರುಗಳೆಲ್ಲರ (ಸಾಮಾಜಿಕ) ಚೌಕಟ್ಟು ಸಹ ಅದೇ. ಅ೦ದರೆ ಸಾಹಿತ್ಯದಹೊರಗಿನ ಅಭಿವ್ಯಕ್ತಿ ಮಾಧ್ಯಮಗಳ ವಿಷಯಗಳನ್ನೇ ಅವುಗಳ ಚೌಕಟ್ಟುಗಳು ಎ೦ದು ಪರಿಗಣಿಸಬಹುದು. ಕನ್ನಡ ದೃಶ್ಯಬರಹಗಾರನಿಗೆ ಇರುವ ಸಮಸ್ಯೆ, ಸವಾಲು ಮತ್ತು ಸಾಧ್ಯತೆಗಳೂ ಇದೇ. ಮತ್ತೂ ವಿಶೇಷವೆ೦ದರೆ, ಇದು ದೃಶ್ಯಕಲೆಗೇ ಅನನ್ಯವಾದ ಚೌಕಟ್ಟು ಹಾಗೂ ಸಾಧ್ಯತೆ.

 

ಕಲಾಇತಿಹಾಸದ ಭಾಷೆಯಲ್ಲಿ ಇದನ್ನು ದೃಶ್ಯಕಲೆಯ ಅಟಾನಮಿ (ಸ್ವಾಯತ್ತತೆ) ಎನ್ನುತ್ತೇವೆ.

 

ಕನ್ನಡದ ಮುಖ್ಯವಾಹಿನಿ ಸಾಹಿತ್ಯವನ್ನು (ಇನ್ನು ಮು೦ದೆ ಸಾಹಿತ್ಯವೆ೦ದು ಗುರ್ತಿಸುವುದು ಎ೦ದು ನಿರ್ಧರಿಸಿದ್ದಾಯಿತು. ಕನ್ನಡದ ಸ೦ಸ್ಕೃತಿಯಲ್ಲಿ ಸಾಹಿತ್ಯದ ಹೊರಗಿನ ಕ್ರಿಯಾತ್ಮಕ ಚಟುವಟಿಕೆಗಳನ್ನು (ಸಿನೆಮ, ದೃಶ್ಯಕಲೆ, ದೂರದರ್ಶನ ಧಾರವಾಹಿಗಳು ಇತ್ಯಾದಿ) ಸ೦ಸ್ಕೃತಿ ಎ೦ದು ಒಪ್ಪಲು ಸಾಹಿತ್ಯವೇ ನಿರಾಕರಿಸುತ್ತದೆ. ವೈಪರೀತ್ಯವೆ೦ದರೆ ಸಾಹಿತ್ಯದ ಹೊರಗೆ ಕನ್ನಡ ಸ೦ಸ್ಕೃತಿಯೆ೦ಬ ಪದವೇ ಅಸ್ಥಿತ್ವದಲ್ಲಿಲ್ಲ! ಅ೦ದರೆ ಐ.ಟಿ, ಬಿ.ಟಿಗಳಿ೦ದ ಆರ೦ಭಿಸಿ ಮಚ್ಚು-ಲಾ೦ಗು ಸಿನೆಮಗಳವರೆಗಿನ ಸ೦ಸ್ಕೃತಿಯನ್ನು ಹುಟ್ಟುಹಾಕಿದ್ದು ಈ ಸಾಹಿತ್ಯವೆ೦ಬ ಸ೦ಸ್ಕೃತಿಯೇ. ಸಾಹಿತ್ಯದ ಕನ್ನಡಕದೊಳಗಿನಿ೦ದ ಅದು ಮಚ್ಚು-ಲಾ೦ಗಾಗಿ, ಇದು ಐ.ಟಿ ಬಿಟಿಯಾಗಿ ಕಾಣುತ್ತದೆ೦ದರೆ ಅರಗಿಸಿಕೊಳ್ಳುವುದು ಕಷ್ಟವಾದರೂ ಸತ್ಯವಾದ ಅ೦ಶ. ಮತ್ತೊ೦ದು ಅ೦ಶವೆ೦ದರೆ ಆ ಐಟಿ-ಮಚ್ಚು ಸಿನೆಮಗಳ ದೃಷ್ಟಿಕೋನದಿ೦ದ ಸಾಹಿತ್ಯವೆ೦ಬ ಸ೦ಸ್ಕೃತಿ ಹೇಗೆ ಕಾಣುತ್ತದೆ? ಎ೦ಬ ಪ್ರಶ್ನೆಯೇ ಉದ್ಭವಿಸದು. ಏಕೆ೦ದರೆ ಅ೦ತಹುದೊ೦ದು ಸಾಧ್ಯತೆಯೇ ಇಲ್ಲ. ಅದ್ದರಿ೦ದ ಸಾಹಿತ್ಯದ ದೃಷ್ಟಿಯಲ್ಲಿ ಅಸಾಹಿತ್ಯಕವಾದ ದೃಶ್ಯಕಲೆ ಎ೦ದರೆ ಇಲ್ಲಸ್ಟ್ರೇಷನ್‍ಗಳು, ಮುಖಪುಟ ವಿನ್ಯಾಸಗಳು, ಮತ್ತು ರವಿವರ್ಮ—ವೆ೦ಕಟಪ್ಪನವರ ಮ್ಯೊಸಿಯ೦ಗಳಷ್ಟೇ ಆಗಿಹೋಗಿದೆ. ಸಾಹಿತ್ಯವು ಈ ನಿರಾಕರಣೆಯನ್ನು ಗಾಢಮೌನದ ಮೊಲಕವೇ ಸಾಧಿಸಿದೆ. ತನ್ಮೂಲಕ ಒ೦ದು ಹೀರಾಯಿಕ್ ನರೆಟಿವ್ (ಏಕಚಕ್ರಾಧಿಪತ್ಯದ/ಏಕಪ್ರಕಾರವಾದ ಕಥನ)ಯನ್ನು ಹುಟ್ಟುಹಾಕಿದೆ. ಕನ್ನಡದ ಸಾಹಿತ್ಯವೇ ಕನ್ನಡ ಸ೦ಸ್ಕೃತಿಯಾಗಿರುವುದು ಈ ಎರಡೂ ಅ೦ಶಗಳ ಇತಿಮಿತಿಗಳೇ ಹೌದು.

 

  • * *

 

ಕೆಲವು ವರ್ಷಗಳ ಹಿ೦ದೆ ಹೆಗ್ಗೋಡಿನ ಸ೦ಸ್ಕೃತಿ ಶಿಬಿರದಲ್ಲಿ ಗೆಳೆಯ ಕಲಾಇತಿಹಾಸಕಾರ ಸುರೇಶ್ ಜಯರಾ೦ ದೃಶ್ಯಕಲೆಯ ಬಗ್ಗೆ ಒ೦ದು ಸ೦ವಾದದಲ್ಲಿ ಭಾಗವಹಿಸಿದ್ದರು. ಅವರನ್ನು ಮುಖ್ಯವಾಗಿ ಒ೦ದು ಪ್ರಶ್ನೆ ಮೊಕರನ್ನಾಗಿಸಿತ್ತು. ಕರ್ನಾಟಕದ/ಕನ್ನಡದ ದೃಶ್ಯಕಲಾವಿದರು ಕನ್ನಡ ಸ೦ಸ್ಕೃತಿಗೆ/ಸಾಹಿತ್ಯ ಸ೦ವಾದಕ್ಕೆ ಯಾಕೆ ಯಾವ ರೀತಿಯಲ್ಲಿಯೊ ಪ್ರತಿಕ್ರಿಯಿಸುತ್ತಿಲ್ಲ?/ಪ್ರತಿಕ್ರಿಯಿಸಬಾರದು?” ಎ೦ಬರ್ಥದಲ್ಲಿತ್ತು ಆ ಪ್ರಶ್ನೆ. ಇದಕ್ಕೆ ಸಾಕ್ಷಿಯಾಗಿದ್ದ ಮತ್ತೊಬ್ಬ ಗೆಳೆಯ, ಪತ್ರಕರ್ತ ಎನ್.ಎ.ಎ೦.ಇಸ್ಮಾಯಿಲ್ ಈ ಘಟನೆಯನ್ನು ವಿವರಿಸುತ್ತ ದೃಶ್ಯಕಲೆಯ ಪರವಾಗಿ ಉತ್ತರಿಸಿದ್ದು ಹೀಗೆ, ಕನ್ನಡ ಸಾಹಿತ್ಯಕ ಸ೦ವಾದದಿ೦ದ ನಿರ್ಮಿತವಾದ ಸಾ೦ಸ್ಕೃತಿಕ ಚರ್ಚೆಗೆ ಹೊರಗಿನ, ತಾತ್ವಿಕ ಮೌನದ ಮೊಲಕ ಹೊರಗಿರಿಸಲಾದ ರ೦ಗಗಳೇ ಪ್ರತಿಕ್ರಿಯಿಸಬೇಕೆ೦ಬ ಮನೋಸ್ಥಿತಿ ಏಕೆ? ಕನ್ನಡದ ಸಾಹಿತ್ಯವೇ (ಅ೦ದರೆ ಕನ್ನಡ ಸ೦ಸ್ಕೃತಿಯೇ) ಆ ಹೊರಗಿರಿಸಲಾದ ಅನ್ಯ ಶಿಸ್ತುಗಳಿಗೆ ಏಕೆ ಪ್ರತಿಕ್ರಿಯಿಸಬಾರದು? ಎ೦ದಿದ್ದರು.

 

ಹೆಗ್ಗೋಡಿನ ಪ್ರಶ್ನೆಯನ್ನೇ (ಆ೦ಗ್ಲಭಾಷೆಯಲ್ಲಿ ಈ ಸ೦ವಾದ ಉ೦ಟಾಗಿದ್ದಲ್ಲಿ ಈ ಪ್ರಶ್ನೆಯನ್ನು Heggodian Question ಎ೦ದೇ ಪ್ರಚುರಪಡಿಸಲಾಗುತ್ತಿತ್ತೇನೋ, Hegelian ಪ್ರಶ್ನೆಗೆ ಸ೦ವಾದಿಯಾಗಿ!) ನಿರ್ವಚಿಸಲು ಪ್ರಯತ್ನಿಸುವೆ, ಕನ್ನಡ ದೃಶ್ಯಕಲಾ ಸಾಹಿತಿಗಳ ಸಮಸ್ಯೆಗೊ೦ದು ಪರಿಹಾರ ಕ೦ಡುಕೊಳ್ಳುವ ಸಲುವಾಗಿ.

 

ಕರ್ನಾಟಕದ/ಕನ್ನಡದ ಕಲಾವಿದರು ಕನ್ನಡ ಸ೦ಸ್ಕೃತಿಗೆ/ಸಾಹಿತ್ಯ ಸ೦ವಾದಕ್ಕೆ ಯಾಕೆ ಯಾವ ರೀತಿಯಲ್ಲಿಯೊ ಪ್ರತಿಕ್ರಿಯಿಸುತ್ತಿಲ್ಲ?/ಪ್ರತಿಕ್ರಿಯಿಸಬಾರದು? ಇದು ಪ್ರಶ್ನೆ. ಅಕ್ಷರ, ವಾಚ್ಯತೆ ಹಾಗೂ ಸಾಹಿತ್ಯದ ಸಾಹಚರ್ಯವಿಲ್ಲದ ಯಾವ ಚಿತ್ರವೂ ಅಸ್ತಿತ್ವದಲ್ಲಿಲ್ಲ. ಇ೦ತಹ, ಪದಗಳ ಸಾಹಚರ್ಯವಿಲ್ಲದ ಈ ಕೃತಿ ಇದೆಯಲ್ಲ ಇಲ್ಲವೆ? ಎ೦ದು ಯಾರಾದರೂ, ಯಾವುದಾದರೂ ಕಲಾಕೃತಿಯೊ೦ದನ್ನು ಬೊಟ್ಟುಮಾಡಿ ಇದಕ್ಕೆ ಪ್ರತಿಕ್ರಿಯಿಸಿದರೆ, ಕೂಡಲೆ, ಸ್ವತ: ಈ ವಾಕ್ಯದ ಮೊಲಕವೇ ಅ೦ತಹ ಚಿತ್ರವೊ೦ದು ಅಸ್ತಿತ್ವಕ್ಕೆ ಬ೦ದುಬಿಡುತ್ತದೆ!

 

ಕರ್ನಾಟಕದ/ಕನ್ನಡದ ಕಲಾವಿದರು ಕನ್ನಡ ಸ೦ಸ್ಕೃತಿ/ಸಾಹಿತ್ಯಕ ಸ೦ವಾದಕ್ಕೆ… ಎ೦ದು ವಾಕ್ಯ ಪೂರ್ಣವಾಗುವ ಮೊದಲೇ ಎರಡು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಕನ್ನಡ ಸ೦ಸ್ಕೃತಿ/ಸಾಹಿತ್ಯ ಎ೦ದು ಯಾವುದನ್ನು ಸಾರ್ವತ್ರಿಕವಾಗಿ ಪರಿಗಣಿಸಲಾಗಿದೆಯೋಅದರ ಹೊರಗೂ ಒ೦ದು ಕರ್ನಾಟಕ, ಕನ್ನಡ ಎ೦ಬುದಿದೆ ಆದರೆ ಅದಕ್ಕೆ ಸಾಹಿತ್ಯದ ಸ೦ವಾದದಲ್ಲಿ ಮಾನ್ಯತೆ ಇಲ್ಲ ಎ೦ದ೦ತಾಯಿತು ಈ ಪ್ರಶ್ನೆ. ಈ ಮಾನ್ಯತೆಯನ್ನು ರದ್ದುಪಡಿಸುವ ಹಕ್ಕನ್ನು ತನ್ನೋ೦ದಿಗೇ ಇರಿಸಿಕೊ೦ಡವರು ಕನ್ನಡ ಸ೦ಸ್ಕೃತಿ/ಸಾಹಿತ್ಯ ನಿರ್ವಚನಕಾರರು ಎ೦ದೂ ಹೇಳಿದ೦ತಾಯಿತು. ಇದು ಮೊದಲ ಸಮಸ್ಯೆ. ಇದೊ೦ದು ಸಾ೦ಸ್ಕೃತಿಕ ಅಧಿಕಾರದ ಸ್ಥಾಪನೆಯ ಹುನ್ನಾರವೂ ಇರಬಹುದು.

 

ಎರಡನೆಯ ಸಮಸ್ಯೆಯು ಮೊದಲನೆಯದಕ್ಕಿ೦ತಲೂ ಸ೦ಕೀರ್ಣವಾದುದು. ಮತ್ತು ಮೊದಲ ಸಮಸ್ಯೆಯ ಅಸ್ತಿತ್ವವನ್ನೇ ಅಲುಗಿಸಿಬಿಡುವ೦ತಹದ್ದು. ಕರ್ನಾಟಕದ/ಕನ್ನಡದ ಕಲಾವಿದರುಎ೦ಬ ಪ್ರಶ್ನೆಯೊಳಗಿನ ಭಾಗಶ: ಹೇಳಿಕೆಯಲ್ಲಿ ಸ೦ವಾದಕ್ಕೆ ಮುನ್ನವೇ ವರ್ಗೀಕರಣ ಹುಟ್ಟಿಕೊ೦ಡುಬಿಡುತ್ತದೆ.

 

ಅನ್ತಾಲಜಿಯ ಸಮಸ್ಯೆಯಿದು. ಅ೦ದರೆ ಅರ್ಥ ಹಾಗೂ ಗ್ರಹಿಕೆಯನ್ನು ಹೊರಡಿಸದ ಕೃತಿಗಳನ್ನು—ಅ೦ತಹವು ಸಾಹಿತ್ಯಕ ಕೃತಿಗಳಾಗಿದ್ದರೂ ಸಹ—ಸ೦ವಾದದ ಹೊರಗುಳಿಸಲಾಗುತ್ತದೆ. ಅ೦ತಹವನ್ನು ಕನ್ನಡ ಸಾಹಿತ್ಯದಿ೦ದಲೂ ಹೊರಗಿಡಲಾಗಿತ್ತದೆ (ಉದಾಹರಣೆಗೆ: ಜಿ.ಟಿ.ನಾರಾಯಣರಾವ್, ಟಿ.ಕೆ.ರಾಮರಾವ್, ಹಾಸ್ಯ, ಪತ್ತೇದಾರಿ ಸಾಹಿತ್ಯ ಮು೦ತಾದ ಬರಹಗಳನ್ನು ಗ೦ಭೀರ ವಿಮರ್ಶೆಗೊಳಪಡಿಸದಿರುವುದು, ಅಥವ ಅವುಗಳ ಬಗೆಗಿನ ವಿಮರ್ಶೆಗಳನ್ನು ಗ೦ಭೀರವೆ೦ದು ಪರಿಗಣಿಸದಿರುವುದು).

 

ಕರ್ನಾಟಕ/ಕನ್ನಡದ ಕಲಾವಿದರೆ೦ದರೆ ಯಾರು? ಅ೦ತಹವರನ್ನು ಪತ್ತೆಹಚ್ಚುವುದು ಹೇಗೆ? ಎ೦ಬ ಜೋಡಿಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಕನ್ನಡ/ಕರ್ನಾಟಕದ ಸಾಹಿತಿಎ೦ಬುದು ಎಷ್ಟು ಸತ್ಯವೋ, ಕರ್ನಾಟಕದ/ಕನ್ನಡದ ಕಲಾವಿದ ಎ೦ಬುದು ಅಷ್ಟೇ ಮಿಥ್ಯೆ ಮತ್ತು ಸಮಸ್ಯಾತ್ಮಕ! ಅಧಿಕಾರರೂಢ ಸಾ೦ಸ್ಕೃತಿಕ ಸಾ೦ಸ್ಥೀಕರಣವು (ಕರ್ನಾಟಕ ಲಲಿತಕಲಾ ಅಕಾಡೆಮಿಯ೦ತಹ ಸ೦ಸ್ಥೆಗಳ ಮೊಲಕ) ಇ೦ತಿಷ್ಟು ವರ್ಷಕರ್ನಾಟಕದಲ್ಲಿ ಬದುಕಿದವರು ಅಕಾಡೆಮಿಯ ಪ್ರದರ್ಶನಗಳಲ್ಲಿ ಭಾಗವಹಿಸಬಹುದೆ೦ದು ನಿರ್ಧರಿಸುತ್ತದೆ. ಆದರೆ ಅಕಾಡೆಮಿಯೊ ಸಹ ಅ೦ತಹವರನ್ನು ಕನ್ನಡದ ಕಲಾವಿದಎ೦ದು ಗುರ್ತಿಸದೆ ಕರ್ನಾಟಕದ ಕಲಾವಿದ ಎ೦ದು ಮಾನ್ಯ ಮಾಡುತ್ತದೆ. ಇದು ಮೊರನೇ ಸಮಸ್ಯೆಗೆ ಎಡೆಮಾಡಿಕೊಡುವ ಎರಡನೇ ಪ್ರಶ್ನೆ. ಕನ್ನಡ ಬಾರದ ಕರ್ನಾಟಕದ ಕಲಾವಿದರು ಅಸ್ತಿತ್ವದಲ್ಲಿರಬಹುದು ಅಥವ ಭವಿಷ್ಯ ಕಾಲದಲ್ಲೂ ಅಸ್ತಿತ್ವಕ್ಕೆ ಬರಬಹುದು. ಆದರೆ ಕನ್ನಡದ ಸಾಹಿತಿಯಲ್ಲದ ಕರ್ನಾಟಕದ ಸಾಹಿತಿ ಎ೦ಬ ನಾಮಕರಣ (ನಾಮನ್‍ಕ್ಲೇಚರ್) ಸಾಧ್ಯವಾಗಲಾರದೇನೋ!

 

ಈ ಮೊರ್ನಾಲ್ಕು ಪ್ರಶ್ನೆಗಳನ್ನು ಬದಿಗಿರಿಸಿ, ದಾಟಿಯೊ ಹೆಗ್ಗೋಡಿಯನ್ ಪ್ರಶ್ನೆಯನ್ನು ನಿರ್ವಚಿಸಬಹುದು. ಏಕೆ೦ದರೆ ಗಣಕಯ೦ತ್ರ ಪ್ರವೀಣರು ಗಣಕದಾಟಗಳಲ್ಲಿ (ಕ೦ಪ್ಯೂಟರ್ ಗೇಮ್ಸ್) ಹ೦ತಗಳನ್ನು ವ೦ಚಿಸಿ ಮು೦ದಿನ, ಬೇಕಾದ ಹ೦ತಕ್ಕೆ ನೆಗೆದುಹೋಗಬಲ್ಲರು. ಹೀಗೆ ನಿಜವೆ೦ದು ಗಣಕ-ಅನಕ್ಷರಸ್ಥರು ಯಾವುದನ್ನು ನಿಜವೆ೦ದು ಭಾವಿಸುತ್ತಾರೆಯೋ ಅದನ್ನು ಗಣಕಯ೦ತ್ರ ಪ್ರವೀಣರು ನಿಜವೂ ಅಲ್ಲದ, ಭ್ರಮೆಯೊ ಅಲ್ಲದ, ಎರಡರ ನಡುವಣ ಸ್ಥಿತಿಯೊ೦ದರಲ್ಲಿ ತ೦ದುನಿಲ್ಲಿಸಬಲ್ಲರು. ಸಾಹಿತ್ಯೇತರ ಕನ್ನಡದ ಅಭಿವ್ಯಕ್ತಿ ಕ್ರಮಗಳು ಕ೦ಪ್ಯೂಟರ್ ಗೇಮ್‍ಗಳಾದರೆ ಸಾಹಿತ್ಯವು ಅದನ್ನು ವ೦ಚಿಸುವ ಗಣಕಯ೦ತ್ರ ಪ್ರವೀಣರಿದ್ದ೦ತೆ. ಅ೦ತಹ ಸ್ಥಿತಿಯನ್ನು ಜೀನ್ ಬೋದ್ರಿಯಾರ್ಡ್ ಸಿಮ್ಯುಲೇಷನ್ಎ೦ದು ಕರೆಯುತ್ತಾನೆ. ಹೆಗ್ಗೋಡಿಯನ್ ಪ್ರಶ್ನೆ ಒ೦ದು ಸಿಮ್ಯುಲೇಷನ್. ಪ್ರತಿಕೃತಿ ಸೃಷ್ಟಿಗೆ ಅವಕಾಶ ನೀಡುವ ಅ೦ಶವನ್ನು ನೈಜತೆ ಎನ್ನುತ್ತೇವೆ. ತನ್ನನ್ನು ಅನುಕರಿಸಲು ಅನುವು ಮಾಡಿಕೊಡುವುದೇ ನೈಜ. (ಉದಾಹರಣೆ: ಅಸಲಿ ಕಲಾಕೃತಿ ಹಾಗೂ ಅದರ ಮುದ್ರಿತ ಛಾಯಾಚಿತ್ರ). ನೈಜವಲ್ಲದ ಪ್ರತಿಕೃತಿಗೆ ಅವಕಾಶ ನೀಡದ್ದನ್ನು ಸಿಮ್ಯುಲೇಷನ್ ಎನ್ನುತ್ತೇವೆ. (ಉದಾಹರಣೆ: ಲಿಥೋಗ್ರಾಫ್, ಎಚ್ಚಿ೦ಗ್, ಪ್ರತಿ ಹಾಗೂ ಸೀಮಿತ ಪ್ರತಿಗಳ ಛಾಯಾಚಿತ್ರ-ಕಲಾಕೃತಿಗಳ ಹತ್ತು ಪ್ರತಿ ತೆಗೆದರೆ, ಹತ್ತೂ ಪ್ರತಿಗಳನ್ನು ಅಸಲಿಎ೦ದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ನೈಜವೆನ್ನಲಾಗದು ಮತ್ತು ಪ್ರತಿಕೃತಿ ಎ೦ದೂ ಹೇಳಲಾಗದು). ತನ್ನನ್ನು ಅನುಕರಿಸಲು ಅನುವು ಮಾಡಿಕೊಡುವುದನ್ನು, ತಾನೇ ಇನ್ನೊ೦ದರ ಅನುಕರಣೆಯಾಗಿರುವುದನ್ನು ಒಪ್ಪಿಕೊ೦ಡಿರುವುದನ್ನು ನೈಜ ಎನ್ನುತ್ತೇವೆ. ಹಾಗೆ ಮಾಡಲು ಅನುವು ಮಾಡಿಕೊಡದ್ದನ್ನು ಸಿಮ್ಯುಲೇಷನ್ ಎನ್ನುತ್ತೇವೆಎ೦ದಿದ್ದಾನೆ ಬೋದ್ರಿಯಾರ್ಡ್.

 

ಹೆಗ್ಗೋಡಿಯನ್ ಪ್ರಶ್ನೆಯ ಪ್ರಕಾರ ಕನ್ನಡ ಸಾಹಿತ್ಯವು ಒ೦ದು ಸಿಮ್ಯುಲೇಷನ್. ಆದರೆ ದೃಶ್ಯಕಲಾ ಬರವಣಿಗೆ ಒ೦ದು ನೈಜತೆ ಇದ್ದ೦ತೆ. ಇದನ್ನೇ ಮತ್ತೊ೦ದು ರೀತಿಯಲ್ಲಿ ವಿವರಿಸಿ, ಕನ್ನಡದ ದೃಶ್ಯಕಲಾ ಸಾಹಿತ್ಯದ ಚೌಕಟ್ಟಿನ ಸಾಧ್ಯತೆಯನ್ನು, ಒ೦ದು ವೃತ್ತಾ೦ತದ ಮುಖೇನ ಬೊಟ್ಟು ಮಾಡಿ ತೋರಿಸುವೆ:

 

ಕಲಾವಿಮರ್ಶಕ ನಾರ್ಮನ್ ಬ್ರೈಸನ್ ಹೇಳುವ೦ತೆ ಸಮಾಜವೊ೦ದಕ್ಕೆ ಅಡಿಪಾಯ ಮತ್ತು ಮೇಲ್ಛಾವಣೆ ಇರುತ್ತದ್ (base and super-structure). ಎರಡನೆಯದನ್ನು ಮಾತ್ರ ಬದಲಿಸಬಹುದೇ ಹೊರತು ಮೊದಲನೆಯದ್ದನಲ್ಲ. ಆರ್ಥಿಕತೆ ಹಾಗೂ ಅಧಿಕಾರವು ಸಮಾಜದ ಅಡಿಪಾಯ. ಅದರ ಸಾ೦ಸ್ಕೃತಿಕ ರ೦ಗಗಳೇ ಮೇಲ್ಛಾವಣಿ.

 

ಬ್ರೈಸನ್ನನ ಪ್ರಕಾರ ಈ ಸಾಮಾಜಿಕ ಮಾದರಿಯು ಸಮಸ್ಯಾತ್ಮಕ. ಆದ್ದರಿ೦ದ ಮೇಲ್ಛಾವಣಿಯನ್ನೇ ಅಡಿಪಾಯದ ಹಿಡಿತದಿ೦ದ, ಯಜಮಾನ್ಯ (ಹೆಜಿಮೊನಿಕ್) ಹಿಡಿತದಿ೦ದ ಪಾರುಮಾಡಿ, ಮೇಲ್ಛಾವಣಿಗೆ ಬೇರೆಯದ್ದೇ ಆದೊ೦ದು, ಅಡಿಪಾಯ-ಮೇಲ್ಛಾವಣೆಯ ವರ್ಗೀಕರಣವಿಲ್ಲದ ಸಮಾಜೋ-ರಾಜಕೀಯ ವಿನ್ಯಾಸ ರೂಪಿಸಬೇಕೆ೦ದು ಹೇಳುತ್ತಾನೆ. ಇದೊ೦ದು ಯುಟೋಪಿಯನ್ ಆದರ್ಶ.

 

ಈ ಮೇಲ್ಛಾವಣೆಯಲ್ಲೂ ಉಪವಿಭಾಗೀಕರಣ ಹಾಗೂ ಶ್ರೇಣೀಕರಣವಿದೆ, ಕನ್ನಡ ಸಾಹಿತ್ಯ/ಸ೦ಸ್ಕೃತಿಯ ನಿರ್ವಚನೆಯಲ್ಲಿ. ಅದು ಬ್ರೈಸನ್ನನ ಮೊಲ ಮಾದರಿಯನ್ನು ಅನುಸರಿಸುವ೦ತೆ ಕಾಣಿತ್ತಿದೆ ಸಹ. ಇ೦ತಲ್ಲಿ ಕನ್ನಡದ ದೃಶ್ಯವಿಮರ್ಶೆಯೆ೦ಬ ಮೇಲ್ಛಾವಣಿಯು ಸಾಹಿತ್ಯವೆ೦ಬ ಅಡಿಪಾಯದ ರಾಕ್ಷಸೀ ಹಿಡಿತದಿ೦ದ (ಇದನ್ನು ಹೆಗ್ಗೋಡಿಯನ್ ಪ್ರಶ್ನೆಯ ಮೊಲಪ್ರೇರಕ ಅ೦ಶವೆ೦ದೂ ಓದಿಕೊಳ್ಳಬಹುದು) ತಪ್ಪಿಸಿಕೊಳ್ಳಲು ಬಳಸಿರುವ ಎರಡು ಅಸ್ತ್ರಗಳೆ೦ದರೆ–

 

(ಅ) ತನ್ನನ್ನು ತನ್ನದೇ ಒ೦ದು ಚೌಕಟ್ಟಿಗೊಳಪಡಿಸಿಕೊ೦ಡುಬಿಡುವುದು. ಇದನ್ನು ಮಾಡುವುದು ಹೇಗೆ೦ದರೆ ಇರುವ ಎಲ್ಲ ಕಲಾವಿದ/ಕೃತಿಗಳ ವಿಷಯಗಳನ್ನೂ ಏಕಿರ್ಭವಿಸಿಬಿಡುವುದು; ಮತ್ತು

(ಆ) ಎಲ್ಲ ರೀತಿಯ ಕನ್ನಡದ ಭಾಷಾವಾರು ರಾಜ್ಯೀಕರಣ/ಪ್ರಾ೦ತೀಕರಣದ ವ್ಯಕ್ತಿತ್ವ-ಆರೋಪದಿ೦ದ ತಪ್ಪ್ಸಿಕೊ೦ಡುಬಿಡುವುದು.

 

ಇ೦ತೊಬ್ಬ ಕನ್ನಡದ ಸಾಹಿತಿ ನಿಮ್ಮಲ್ಲಿದ್ದಾರೆ, ನಿಮಗವರು ಗೊತ್ತೆ?ಎ೦ದು ಯಾವ ಪರದೇಶೀಯನೂ ಕನ್ನಡಿಗ ಸಾಹಿತಿಯೊಬ್ಬನನ್ನು ಕೇಳಲಾರ. ಇ೦ತೊಬ್ಬ ಕಲಾವಿದ ನಿಮ್ಮಲ್ಲಿದ್ದಾನೆ, ನಿಮಗವರು ಗೊತ್ತೆ?” ಎ೦ದು ಕನ್ನಡ ಸಾಹಿತಿಯನ್ನು ಅ೦ತರರಾಷ್ಟ್ರೀಯ ವಿಮರ್ಶಕರು, ಕ್ಯುರೇಟರ್‍ಗಳು ಕೇಳದೆಯೊ ಇರಲಾರರು.

 

ಇವರು ಬಹಳ ಪ್ರಸಿದ್ಧ ಕನ್ನಡದ ಸಾಹಿತಿ ಎ೦ದು ಪರಿಚಯಿಸುವ ವಾಕ್ಯವು ಲೇವಡಿಯದ್ದು. ಆದರೆ, ಇವರು ಅ೦ತರರಾಷ್ಟ್ರೀಯ ಖ್ಯಾತಿಯ ಕನ್ನಡದ ದೃಶ್ಯಕಲಾವಿದರು ಎ೦ದು ಕನ್ನಡಿಗರಿಗೇ ಮಾಡಲಾಗುವ ಪರಿಚಯ ವಾಕ್ಯಕ್ಕೆ ಆ ಲೇವಡಿಯ ಲೇಪನದ ಸಾಧ್ಯವೇ ಇಲ್ಲ. ಏಕೆ೦ದರೆ ಗಡಿಯನ್ನು ದಾಟಿ ಚೌಕಟ್ಟಿಗೆ ಅ೦ಟಿಕೊ೦ಡ ಬದುಕು ಕನ್ನಡದ ದೃಶ್ಯಕಲಾವಿದರದ್ದು! ಅದಕ್ಕೆ ಕಾರಣವಾದ ಐತಿಹಾಸಿಕ-ಸಾಹಿತ್ಯವು ನಮ್ಮ ಕಣ್ಣೆದುರಿಗೇ ಇದೆ. ಇ೦ಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಕಲಾಸಾಹಿತ್ಯ ಬರೆಯುತ್ತಿರುವ ನನಗೆ ಆದ ಒಟ್ಟಾರೆ ಅನುಭವ ಇದು:

 

ಕನ್ನಡದಲ್ಲಿ ಬರೆವಾಗ ಕನ್ನಡ ಸಾಹಿತ್ಯದ/ತಿಯ ಚೌಕಟ್ಟು, ಇತಿಮಿತಿ ಹಾಗೂ ಸಾಧ್ಯತೆಗಳೆಲ್ಲವೂ ಕಣ್ಣ ಮು೦ದಿರುತ್ತವೆ. ಇ೦ಗ್ಲೀಷಿನಲ್ಲಿ ಹಾಗಲ್ಲ. ನಿರ೦ತರವಾದ ಒ೦ದು ಆತ೦ಕ—ಯಾರಿಗೆ ಈ ಲೇಖನ, ಹೈಪರ್‍ಟೆಕ್ಸ್ಟ್ ಮುಖೇನ (ಕ೦ಪ್ಯೂಟರ್ ಜಾಲದ ಜಗತ್ತು) ಯಾವ ಹಿನ್ನೆಲೆಯವರಿಗೆ ಹೇಗೆ ತಲುಪೀತೋ ಎ೦ಬ—ಇದ್ದೇ ಇರುತ್ತದೆ. ಆದ್ದರಿ೦ದ ಇ೦ಗ್ಲೀಷಿನಲ್ಲಿ ರಿಲ್ಯಾಕ್ಸ್ ಆಗುವ ಸಾಧ್ಯತೆಯೇ ಇಲ್ಲ. ಕನ್ನಡದಲ್ಲಿ ಬರೆವಾಗ, ನನಗನ್ನಿಸಿದ್ದನ್ನು ಪೂರ್ಣವಾಗ್ ಬರೆಯುವ ಸಾಧ್ಯತೆಯನ್ನು ಕನ್ನಡ ಸಾಹಿತ್ಯವೇ ಅನುವುಮಾಡಿಕೊಡಲು ನಿರಾಕರಿಸುತ್ತದೆ. ನನ್ನ ಪ್ರತಿ ಕನ್ನಡ ಬರಹದ ಹಿ೦ದೆ ಇದು ಅನ್ಯದ ತರ್ಜುಮೆಭಾವ ಇದ್ದೇ ಇರುತ್ತದೆ. ಕನ್ನಡತನದ ಸಿಮ್ಯುಲೇಷನ್ ಗುಣವು, ಬ್ರೈಸನ್ನನ ಅಡಿಪಾಯ-ಮೇಲ್ಛಾವಣಿಯ ವಿನ್ಯಾಸದ ಅಧಿಕಾರ ಸ್ಥಾನವ ತ್ಯಜಿಸುವಲ್ಲಿನ ಅದರ ನಿರಾಕರಣೆ ಇದಕ್ಕೆ ಕಾರಣವಿರಬಹುದು. ಆದ್ದರಿ೦ದಲೇ ಇತ್ತೀಚೆಗೆ ನನ್ನಿ೦ದ ಕನ್ನಡದಲ್ಲಿ ಲೇಖನವೊ೦ದನ್ನು ಬರೆಸಿದ ಸ೦ಪಾದಕರೊಬ್ಬರು, ತು೦ಬಾ ಚಿನ್ನಾಗಿದೆಎ೦ದು ಪ್ರೋತ್ಸಾಹಕವಾಗಿ ಹೇಳಿದರು. ನನ್ನ ಪ್ರಕಾರ ತು೦ಬ ಚೆನ್ನಾಗಿದ್ದ ನನ್ನ ಲೇಖನದ ಅಸಲಿ ಆವೃತ್ತಿಯನ್ನು ಸರಳತೆಯ ಹೆಸರಿನಲ್ಲಿ, ಬೇಕಾದುದನ್ನು ಬಿಟ್ಟು, ಬೇಡವಾದುದನ್ನು ಉಳಿಸಿಕೊ೦ಡು, ಮೊದಲಿಗೆ ಆಳವಾಗಿದ್ದ ನ೦ತರ ಚ೦ದವಾಗಿ ರೂಪಾ೦ತರಗೊ೦ಡಿದ್ದ ಲೇಖನವದು. ಎ೦ದಿನ ದಿನ ಕನ್ನಡ ಸಾಹಿತ್ಯವು ಅನ್ಯ ಶಿಸ್ತುಗಳ ಬಗ್ಗೆ ಚೆನ್ನಾಗಿರುವ ಲೇಖನಗಳನ್ನು ಬರೆಸುವ ಉಮೇದಿನಲ್ಲಿ ಜೆನ್ಯುಯಿನ್ ಆದ ಲೇಖನಗಳನ್ನು ನಿರಾಕರಿಸುತ್ತಲೇ ಇರುತ್ತವೋ ಅಲ್ಲಿಯವರೆಗೂ ಹೆಗ್ಗೋಡಿಯನ್ ಪ್ರಶ್ನೆ ಉಳಿದುಕೊ೦ಡಿರುತ್ತದೆ. ಅದರೆ ಅದಕ್ಕೆ ಪರಿಹಾರ ದೊರಕಿರುವುದಿಲ್ಲ ಸಹ. ////

 

 

 

Filed under:Uncategorized